ತುಪ್ಪಹೀರೆ -
ಭಾರತದ ಎಲ್ಲ ಭಾಗಗಳಲ್ಲಿಯೂ ವ್ಯಾಪಕವಾಗಿ ಬೆಳೆಸಲಾಗುವ ಒಂದು ತರಕಾರಿ ಸಸ್ಯ (ಸ್ಪಂಜ್ ಗಾರ್ಡ್). ಭಾರತವೇ ಇದರ ತವರು ಎಂದು ಹೇಳಲಾಗಿದೆ. ಇದರಲ್ಲಿ ತಿನ್ನಲು ಯೋಗ್ಯವಾದ ಹಾಗೂ ಕಹಿಯಾದ ಬಗೆಗಳಿವೆ. ತಿನ್ನಲು ಯೋಗ್ಯವಾದ ಬಗೆಯನ್ನು ಪ್ರಪಂಚದ ಉಪೋಷ್ಣ ದೇಶಗಳಲ್ಲೆಲ್ಲ ಬೆಳೆಸಲಾಗುತ್ತಿದೆ. ಆದರೆ ಸಮುದ್ರಮಟ್ಟಕ್ಕಿಂತ 1,000ಮೀ. ಎತ್ತರದ ಪ್ರದೇಶಗಳಲ್ಲಿ ಮಾತ್ರ ಇದರ ಕೃಷಿ ಇಲ್ಲ. ತುಪ್ಪಹೀರೆ ಕ್ಯುಕರ್ಬಿಟೇಸೀ ಕುಟುಂಬಕ್ಕೆ ಸೇರಿದೆ. ಇದರ ಶಾಸ್ತ್ರೀಯ ಹೆಸರು ಲಫ ಸಿಲಿಂಡ್ರಿಕ (ಲಫ ಈಜಿಪ್ಬಿಯಾಕ).

ಇದರ ಬೀಜವನ್ನು ಮಾರ್ಚ್-ಜುಲೈ ತಿಂಗಳಲ್ಲಿ ಬಿತ್ತಲಾಗುವುದು. ಬಿತ್ತುವ ಮುನ್ನಚೆನ್ನಾಗಿ ಕಾವಳಿಗಳನ್ನು ಮಾಡಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಕಿ ಬೀಜಗಳ ನಡುವೆ ಹಾಗೂ ಸಾಲುಗಳ ನಡುವೆ 6 ಅಂತರವಿರುವಂತೆ ಬೀಜ ಬಿತ್ತಲಾಗುತ್ತದೆ. ಸಸಿಗಳು 1-2 ಎತ್ತರಕ್ಕೆ ಬೆಳೆದ ಅನಂತರ ಬಳ್ಳಿ ಹಬ್ಬುವ ಸಲುವಾಗಿ ಚಪ್ಪರವನ್ನಾಗಲಿ ಬೇರೆ ರೀತಿಯ ಆಧಾರವನ್ನಾಗಲಿ ಒದಗಿಸಲಾಗುವುದು. ವಾರಕ್ಕೆ ಎರಡಾವರ್ತಿ ನೀರನ್ನು ಹಾಯಿಸುವುದು ವಾಡಿಕೆ.

ತುಪ್ಪಹೀರೆ ಒಂದು ಏಕವಾರ್ಷಿಕ ಬಳ್ಳಿ. ನೋಡಲು ಹೀರೆಬಳ್ಳಿಯಂತೆಯೇ ಕಾಣುತ್ತದೆ. ಅದರಂತೆಯೇ ಇದರಲ್ಲೂ ಹಸ್ತಾಕಾರದ ಎಲೆಗಳುಂಟು. ಒಂದೊಂದು ಎಲೆಯಲ್ಲೂ 5-7 ಹಾಲೆಗಳಿವೆ. ಎಲೆಗಳ ಜೋಡಣೆ ಪರ್ಯಾಯ ರೀತಿಯಲ್ಲಿ. ಒಂದೇ ಬಳ್ಳಿಯಲ್ಲಿ ಗಂಡು, ಹೆಣ್ಣು ಹೂಗಳು ಬೇರೆ ಬೇರೆ ಇವೆ. ಗಂಡುಹೂಗಳು ಮಂಜರಿಗಳಲ್ಲಿದ್ದರೆ ಹೆಣ್ಣುಹೂಗಳು ಒಂಟೊಂಟಿಯಾಗಿವೆ. ಗಂಡು ಹೂವಿನಲ್ಲಿ ಪುಷ್ಪಪಾತ್ರೆ, ಸಂಯುಕ್ತ ಮಾದರಿಯ ದಳಸಮೂಹ ಹಾಗೂ 5 ಕೇಸರಗಳುಂಟು. ಹೆಣ್ಣುಹೂವಿನಲ್ಲಿ ಪುಷ್ಪಪಾತ್ರೆ, ದಳಸಮೂಹಗಳ ಜೋತೆಗೆ ಮೂರು ಕಾರ್ಪೆಲುಗಳಿಂದ ರಚಿತವಾದ ಅಂಡಾಶಯ ಉಂಟು. ಕಾಯಿಗಳು ಉರುಳೆಯಾಕಾರದದವು. ಮೇಲ್ಮೈ ನಯವಾಗಿದೆ. ಕಾಯಿಯ ಉದ್ದ 20-50ಸೆಂ.ಮೀ ಎಳೆಯ ತುಪ್ಪ ಹೀರೆಕಾಯಿಯನ್ನು ತರಕಾರಿಯಾಗಿ ಬಳಸುವರು. ಬಲಿತಾಗ ಇದರ ಸಿಪ್ಪೆಯಲ್ಲಿನ ನಾಳಕೂರ್ಚಗಳು ಗಡಸುಗೊಳ್ಳುವುವು. ಇಂಥ ಬಲಿತ ಕಾಯಿಗಳನ್ನು ನೀರಿನಲ್ಲಿ ಹಲವು ಕಾಲ ನೆನಯಿಟ್ಟರೆ ಸಿಪ್ಪೆಯ ಹೊರಭಾಗವು ಒಳಗಿನ ತಿರುಳೂ ಕೊಳೆತು ಬಿದ್ದುಹೋಗುವವು. ನಾಳಕೂರ್ಚದ ಪಂಜರ ಮಾತ್ರ ಒಂದು ರೀತಿಯ ಸ್ಪಂಜಿನ ರೂಪದಲ್ಲಿ ಉಳಿದುಕೊಳ್ಳುತ್ತದೆ. ಇದನ್ನು ಸ್ವಚ್ಚಗೊಳಿಸಿ, ಬಿಸಿಲಿನಲ್ಲಿ ಒಣಗಿಸಿ, ಸ್ನಾನಮಾಡುವಾಗ ಮೈತಿಕ್ಕುವ ಸ್ಪಂಜಾಗಿ ಬಳಸಲಾಗುತ್ತದೆ. ಅಲ್ಲದೆ ಕಾರು, ಗಾಜಿನ ಸಾಮನು, ಅಡುಗೆ ಪಾತ್ರೆ ಮುಂತಾದವನ್ನು ಉಜ್ಜುವುದಕ್ಕೂ ಈ ಸ್ಪಂಜನ್ನು ಉಪಯೋಗಿಸುವುದುಂಟು. ಅಲ್ಲದೆ ತುಪ್ಪಹೀರೆಯ ಸ್ಪಂಜಿಗೆ ಶಬ್ದ ಹಾಗೂ ಅಘಾತವನ್ನು ಹೀರಿಕೊಳ್ಳುವ ಗುಣ ಇರುವುದರಿಂದ ಉಕ್ಕಿನ ಶಿರಸ್ತ್ರಾಣ ಮುಂತಾದ ವಸ್ತುಗಳ ತಯಾರಿಕೆಯಲ್ಲಿ ಇದನ್ನು ಬಳಸುವುದಿದೆ. ಪ್ಲಾಸ್ಟರಿನೊಂದಿಗೆ ಸೇರಿಸಿ ಶಬ್ದರೋಧಿ ಹಾಗೂ ಉಷ್ಣರೋಧಿ ಹಲಗೆಗಳ ತಯಾರಿಕೆಗೂ ಇದನ್ನು ಉಪಯೋಗಿಸಬಹುದು. ಅಲ್ಲದೆ ಇದರಿಂದ ಸೆಲ್ಯೂಲೋಸನ್ನೂ ಪಡೆಯಬಹುದಾಗಿದ್ದು ಕಾಗದ ತಿರುಳಿನ ತಯಾರಿಕೆಗಾಗಿ ಇದನ್ನು ಬಳಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗಿದೆ. ಇಷ್ಟೊಂದು ಉಪಯುಕ್ತವೆನಿಸಿರುವ ತುಪ್ಪಹೀರೆ ಉತ್ತಮ ಬಗೆಯದೆಂದೂ ಕಂಡುಬಂದಿದೆ. ಭಾರತದಲ್ಲಿ ಬೆಳೆಯುವ ಬಗೆಯೂ ತೃಪ್ತಿಕರವಾದ್ದೆಂದೂ ಹೇಳಲಾಗಿದೆ. ಜಪಾನಿನಲ್ಲಿ ಬಳ್ಳಿಗಳನ್ನು ಜಾಳಂದರಗಳ ಮೇಲೆ ಹಬ್ಬಿಸಿ ಬೆಳೆಸಲಾಗುತ್ತದೆ. ಮುಖ್ಯ ಕಾಂಡ ಚೆನ್ನಾಗಿ ಬೆಳೆಯುವಂತೆ ಮಾಡುವುದಕ್ಕಾಗಿ ಕವಲುಗಳನ್ನು ಕತ್ತರಿಸಿಹಾಕಲಾಗುತ್ತದೆ. ಗಂಡು ಹೂಗಳನ್ನು ಕೆಲವು ಹೆಣ್ಣುಹೂಗಳನ್ನು ತೆಗೆದುಹಾಕಿ ಬಳ್ಳಿಯೊಂದರಲ್ಲಿ 20-25 ಕಾಯಿಗಳು ಮಾತ್ರ ಉಳಿಯುವಂತೆ ಮಾಡಲಾಗುತ್ತದೆ. ಕಾಯಿಗಳು ಸಂಪೂರ್ಣ ಬಲಿತ ಮೇಲೆ (ಅಂದರೆ ಕಾಯಿಯ ಬುಡ ಹಾಗೂ ತುದಿಭಾಗಗಳು ಹಳದಿಬಣ್ಣವನ್ನು ತಳೆಯತೊಡಗಿದಾಗ) ಕೊಯ್ಲು ಮಾಡಲಾಗುತ್ತದೆ. ಎಕರೆಯ ಸುಮಾರು 24,000 ಕಾಯಿಗಳಷ್ಟು ಇಳುವರಿ ಇದೆ. ಜಪಾನಿನಿಂದ ಜರ್ಮನಿ, ಯುನೈಟೆಡ್ ಕಿಂಗ್‍ಡಮ್, ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ತುಪ್ಪಹೀರೆ ಸ್ಪಂಜನ್ನು ರಫ್ತು ಮಾಡಲಾಗುತ್ತದೆ.

 	ತುಪ್ಪಹೀರೆ ಬಳ್ಳಿಗೆ ಔಷದಿಯ ಮಹತ್ತ್ವವೂ ಉಂಟು. ಇದರ ಕಾಂಡದ ಮೇಲೆ ನೆಲದಿಂದ ಸುಮಾರು ಒಂದು ಇಂಚಿನಷ್ಟು ಎತ್ತರದಲ್ಲಿ ಕೊಯ್ತುಗಳನ್ನುಂಟುಮಾಡಿ ಒಂದು ತೆರನ ರಸವನ್ನು ಪಡೆಯಬಹುದು. ಈ ರಸ ಉಸಿರಾಟದ ತೊಂದರೆಗಳ ಚಿಕಿತ್ಸೆಗೆ ಸಹಕಾರಿ ಎಂದು ಹೇಳಲಾಗಿದೆ. ಎಳೆಯ ತುಪ್ಪಹೀರೆ ಕಯಿಯನ್ನು ಮೂತ್ರೋತ್ತೇಜಕ ಹಾಗೂ ಕ್ಷೀರೋತ್ತೇಜಕವೆಂದು ಬಗೆಯಲಾಗಿದೆ. ಚೀನದಲ್ಲಿ ಮಾಗಿದಹಣ್ಣನ್ನು ಸುಟ್ಟು ಚೂರ್ಣಿಕರಿಸಿ ಜಂತುನಾಶಕ ಮತ್ತು ವಾತಹರವನ್ನಾಗಿ ಬಳಸಲಾಗುತ್ತದೆ. ಹಣ್ಣಿನ ರಸಕ್ಕೆ ವಿರೇಚಕಗುಣ ಉಂಟು.
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ